This is an article of mine, which was published in Praja Pragathi Kannada Daily News Paper. I wrote an article on the topic of education in my mother tongue Kannada. I sent it to the editor of the Praja Pragathi. After 12 days it is published in the newspaper.
Full article written below
ಶಿಕ್ಷಣ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ಜೀವಿಗೂ ಬೇಕಾದ ಒಂದು ಸಾಧನ. ಪ್ರಾಣಿಗಳಿಗೂ ಕೂಡ ಶಿಕ್ಷಣ ಬೇಕು ಮನುಷ್ಯರಾದ ನಾವು ಕೂಡ ಶಿಕ್ಷಣ ಪಡೆಯಬೇಕು. ಕಾಡು ಪ್ರಾಣಿಗಳು ತನ್ನ ಮರಿಗಳಿಗೆ ಹೇಗೆ ತನ್ನನು ತಾನು ರಕ್ಷಣೆ ಮಾಡಿಕೊಳ್ಳಬೇಕು ಮತ್ತು ಹೇಗೆ ಬೇಟೆಯಾಡಬೇಕು ಎಂದು ಹೇಳಿಕೊಡುತ್ತವೆ. ನೀರುನಾಯಿ ತನ್ನ ಮರಿಗಳಿಗೆ ಈಜಾಡುವುದನ್ನು ಕಲಿಸಿಕೊಟ್ಟರೆ, ಪಕ್ಷಿಗಳು ತನ್ನ ಮರಿಗಳಿಗೆ ಹಾಡುವುದನ್ನು ( ಶಬ್ಧಗಳನ್ನು ) ಅವುಗಳು ಕಲಿಯುವವರೆಗೆ ಬೀಡದೆ ಹೇಳಿಕೊಡುತ್ತವೆ. ನಾವು ಪ್ರಾಣಿಗಳ ಲೋಕದಲ್ಲಿ ಮೀಸಲಾತಿ ಮತ್ತು ತಾರತಮ್ಯತೆ ನೋಡುವುದಿಲ್ಲ, ಅಲ್ಲಿ ಎಲ್ಲರೂ ಸಮಾನರು. ತಾಯಿ ತಂದೆಯರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಹೇಗೆ ಊಟ ಮಾಡಬೇಕು, ಹೇಗೆ ಮಾತನಾಡಬೇಕು ಮುಂತಾದ ವಿಷಯಗಳನ್ನು ಹೇಳಿಕೊಡುತ್ತಾರೆ. ನಂತರ ಮಕ್ಕಳು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ಶಿಕ್ಷಣ ಪಡೆಯಲು ತೆರಳುತ್ತಾರೆ.
ಭಾರತ ದೇಶದಲ್ಲಿ ಶತ-ಶತಮಾನಗಳಿಂದ ಶಿಕ್ಷಣವನ್ನು ಮಕ್ಕಳಿಗೆ ಹೇಳಿಕೊಡುತ್ತ ಬಂದಿದ್ದಾರೆ. ಗುರುಕುಲಗಳಲ್ಲಿ ತಮ್ಮ ಜಾತಿಯ ಮಕ್ಕಳಿಗೆ ಮತ್ತು ಉಳ್ಳವರ ಮಕ್ಕಳಿಗೆ ಹಿಂದೆ ಹೇಳಿಕೊಡುತ್ತಿದ್ದರು. ಬಡವರು ಮತ್ತು ಕೆಳ ಜಾತಿಯ ಮಕ್ಕಳು ಔಪಚಾರಿಕ ಶಿಕ್ಷಣದಿಂದ ವಂಚಿತಗೊಳ್ಳುತ್ತಿದ್ದರು. ಬಡ ಮತ್ತು ಕೆಳ ಜಾತಿಯ ಮಕ್ಕಳು ಕೇವಲ ಅನೌಪಚಾರಿಕ ಶಿಕ್ಷಣ ಮಾತ್ರ ಪಡೆಯುತ್ತಿದ್ದರು. ಬ್ರಾಹ್ಮಣರು ಹಿಂದೆ ತಮ್ಮ ಜಾತಿ ಮತ್ತು ಉಳ್ಳವರ ಮಕ್ಕಳಿಗೆ ಮಾತ್ರ ಅಕ್ಷರದ ಜ್ಞಾನ, ವೇದ, ಉಪನಿಷತ್ತುಗಳನ್ನು ನೀಡುತ್ತಿದ್ದರು. ಕೆಳ ಜಾತಿಯವರು ಕೇವಲ ತನ್ನ ಜಾತಿಗೆ ಸಂಬಂಧಪಟ್ಟ ಕಸುಬುಗಳನ್ನು ಮಾತ್ರ ಕಲಿಯುತ್ತಿದ್ದರು. ಮಹಾಭಾರತದಲ್ಲಿ ಕರ್ಣ ಬಿಲ್ಲು ವಿದ್ಯೆಯನ್ನು ಹೇಳಿಕೊಡುವಂತೆ ದ್ರೋಣಾಚಾರ್ಯರ ಬಳಿ ಹೋದಾಗ ಆದ ಅವಮಾನ ನಿಮಗೆ ತಿಳಿದಿದೆ. ಕರ್ಣನ ಜಾತಿ ತಿಳಿದ ದ್ರೋಣಾಚಾರ್ಯರು ಅವನಿಗೆ ವಿದ್ಯೆ ನೀಡಲು ನಿರಾಕರಣೆ ಮಾಡಿದರು. ಅದಕ್ಕೆ ಕರ್ಣ ಬ್ರಾಹ್ಮಣರ ವೇಷತೊಟ್ಟು ಪರುಶುರಾಮರ ಬಳಿ ಬಿಲ್ಲು ವಿದ್ಯೆಯನ್ನು ಕಲಿತ. ಹೀಗೆ ಔಪಚಾರಿಕ ಶಿಕ್ಷಣದಿಂದ ಕೆಲ ಸಮುದಾಯಗಳು ವಂಚಿತರಾಗುತ್ತಲೆ ಇರುತ್ತಾರೆ. ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ನಮ್ಮಲ್ಲಿದ್ದ ಹಲವಾರು ಕೆಟ್ಟ ಸಂಪ್ರದಾಯಗಳನ್ನು ತೆಗೆದು ಹಾಕುತ್ತಾರೆ.
ಬ್ರಿಟಿಷರು ಭಾರತಕ್ಕೆ ಆಧುನಿಕ ಶಾಲಾ ವ್ಯವಸ್ಥೆಯನ್ನು ಪರಿಚಯಿಸಿಕೊಟ್ಟರು. ಬ್ರಿಟಿಷರು ಎಲ್ಲಾ ಸಮುದಾಯದ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಕ್ರಮ ಕೈಗೊಂಡರು. ಕೆಲ ಶಿಕ್ಷಕರು ಕೆಳ ಜಾತಿಯ ಮಕ್ಕಳಿಗೆ ಗೋಣಿಚೀಲದ ಮೇಲೆ ಕುಳಿಸಿ ಮತ್ತು ಕೆಲವರನ್ನು ಕೊಠಡಿಯ ಆಚೆ ನಿಲ್ಲಿಸಿ ಶಿಕ್ಷಣ ನೀಡುತ್ತಿದರು. ಅಂಬೇಡ್ಕರ್ ಶಿಕ್ಷಣ ಪಡೆಯಲು ಎಷ್ಟು ಕಷ್ಟ ಪಟ್ಟರು ಎಂದು ನಮಗೆ ತಿಳಿದೆ ಇದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಮತ್ತು ಸಂವಿಧಾನ ರಚನೆಯಾದ ಮೇಲೆ ನಮಗೆ ತಿಳಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ತಂದರು. ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಬಂದ ಮೇಲೆ ಭಾರತದ ಪ್ರತಿಯೊಬ್ಬ ಪ್ರಜೆಯು ಶಿಕ್ಷಣ ಪಡೆಯಲು ಅರ್ಹರಾಗಿದ್ದರು. ಕೆಲವು ಮೇಲ್ ಜಾತಿಯ ಶಿಕ್ಷಕರು ಕೆಳ ಜಾತಿಯ ವಿದ್ಯಾರ್ಥಿಗಳಿಗೆ ಅವಮಾನ ಮತ್ತು ಅವರಿಂದ ಕೆಲಸ ಮಾಡಿಸುತ್ತ ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿದ್ದರು. ಕಾಲ ಬದಲಾದಂತೆ ಮತ್ತು ಸರ್ಕಾರಗಳು ಬದಲಾದಂತೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುತ್ತ ಬಂದಿದ್ದಾರೆ.
ಈಗ ಪ್ರಸ್ತುತ ನಾವು 21ನೇ ಶತಮಾನದಲ್ಲಿ ಇದ್ದೇವೆ. ೨೦೧೪ರ ಸಮೀಕ್ಷೆಯ ಪ್ರಕಾರ ಈಗಲೂ ಕೊಡ ೩ ಕೋಟಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರೆ. ಈಗ ನಾನು ಏನು ಹೇಳಬೇಕೆಂದು ಬಯಸಿದ್ದೇನೆ ಅದನ್ನು ಹೇಳುತ್ತೇನೆ. ಕಾಲ ಬದಲಾದಂತೆ ಜಾತಿಯಾಧಾರಿತ ಕಸುಬುಗಳು ಕೊಡ ಬದಲಾಗಿದೆ. ಎಲ್ಲಾ ಸಮುದಾಯದವರು ಕೃಷಿ ಮಾಡುತ್ತಾರೆ. ತಮ್ಮ ಕುಲಕಸುಬುಗಳನ್ನು ತ್ಯಜಿಸಿ ಸಮಾಜದಲ್ಲಿರುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಈಗಿನ ಕಾಲದಲ್ಲಿ ನಾವು ಎಲ್ಲಾ ಜಾತಿಯಲ್ಲಿ ಬಡವರು ಮತ್ತು ಶ್ರೀಮಂತರನ್ನು ಕಾಣುತ್ತೇವೆ. ನಾವು ಯೋಚನೆ ಮಾಡಬೇಕಾಗಿರುವುದು ಪ್ರಸ್ತುತ ಈಗಿನ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಬೇಕೆ? ಎಂಬುದು. ನಾವು ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಬಗ್ಗೆ ಮಾತನಾಡುವುದು ಬೇಡ ಅಲ್ಲಿ ಮೀಸಲಾತಿ ಮುಂದುವರೆಯಲಿ, ಏಕೆಂದರೆ ನಮ್ಮಲ್ಲಿ ಇರುವ ಕೆಲ ಜನ ಬದಲಾವಣೆ ಬಯಸುವುದಿಲ್ಲ ಮತ್ತು ಎಲ್ಲಾರನ್ನು ನಮ್ಮಂತೆ ಸಮಾನರು ಎಂದು ಪರಿಗಣಿಸುವುದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ನಾವು ಮೀಸಲಾತಿಯನ್ನು ತೆಗೆದು ಎಲ್ಲಾ ಸಮುದಾಯದಲ್ಲಿರುವ ಬಡ ಮಕ್ಕಳಿಗೆ ಉನ್ನತ ಉಚಿತ ಶಿಕ್ಷಣ ನೀಡಬೇಕು ಅಲ್ಲವೆ.
ನಾವು ಪ್ರಪಂಚದಲ್ಲಿ ಯಾವ ಯಾವ ದೇಶಗಳಲ್ಲಿ ಉಚಿತ ಶಿಕ್ಷಣವಿದೆ ಎಂದು ತಿಳಿದುಕೊಳ್ಳೋಣ ಬನ್ನಿ. ಅರ್ಜೆಂಟೀನಾ, ಬ್ರೆಜಿಲ್, ಚೀನಾ, ಫ್ರಾನ್ಸ್, ಜರ್ಮನಿ, ಸ್ಕಾಟ್ ಲ್ಯಾಂಡ್, ಫೀಜಿ, ಇರಾನ್, ನ್ಯೂಜಿಲ್ಯಾಂಡ್, ಫಿಲಿಫಿನ್ಸ್, ರಷ್ಯ, ಅಮೇರಿಕ ಮತ್ತು ಮುಂತಾದ ದೇಶಗಳು ತಮ್ಮ ಮಕ್ಕಳಿಗೆ ಉಚಿತವಾಗಿ ಉನ್ನತ ಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ನಮ್ಮ ದೇಶದಲ್ಲಿ ಶಿಕ್ಷಣ ಉಚಿತ ಇದ್ದರು ಅದಕ್ಕೆ ಬೇಕಾದ ಮೂಲ ಸೌಕರ್ಯವಿಲ್ಲ. ಎಲ್ಲಾ ಕಡೆ ಖಾಸಗಿ ಶಾಲೆಗಳದ್ದೆ ದರ್ಬಾರು. ನಮ್ಮ ದೇಶದಲ್ಲಿ ಎಲ್ಲಾ ಮಕ್ಕಳು, ಕೆಲವು ಮಕ್ಕಳನ್ನು ಹೊರತುಪಡಿಸಿ ಮಿಕ್ಕೆಲ್ಲರು ೧೦ನೇ ತರಗತಿಯವರೆಗೆ ಕಡಿಮೆ ವೆಚ್ಚದಲ್ಲಿ ಓದಿರುತ್ತಾರೆ. ನಂತರ ಪದವಿ ಪೂರ್ವ ಮತ್ತು ಉನ್ನತ ಶಿಕ್ಷಣ ಪಡೆಯಲು ತೆರಳುತ್ತಾರೆ. ಸಮಸ್ಯೆ ಇಲ್ಲಿಂದನೆ ಶುರುವಾಗುತ್ತದೆ. ಮೀಸಲಾತಿ ಇರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯುತ್ತಾರೆ ಮತ್ತು ಶುಲ್ಕದಲ್ಲಿ ರಿಯಾಯಿತಿ ಪಡೆಯುತ್ತಾರೆ. ಮೀಸಲಾತಿ ಇಲ್ಲದೆ ಇರುವವರಲ್ಲಿ ಶ್ರೀಮಂತ ಅಥವಾ ದುಡ್ಡು ಇರುವ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಶುಲ್ಕ ಪಾವತಿಮಾಡಿದರೆ, ಮೀಸಲಾತಿ ಇಲ್ಲದವರು ಪೂರ್ಣ ಪ್ರಮಾಣದ ಶುಲ್ಕ ಕಟ್ಟದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೆಲ ಸರ್ಕಾರಗಳು ಹಿಂದೆ ಸರ್ಕಾರಿ ಕಾಲೇಜಿನ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ನೀಡಿತ್ತು ಸಂತೋಷ, ಆದರೆ ಅವರು ಕೇವಲ SC ಮತ್ತು ST ವಿದ್ಯಾರ್ಥಿಗಳಿಗೆ ನೀಡಿತ್ತು. ಏಕೆ ಇತರೆ ವಿದ್ಯಾರ್ಥಿಗಳು ಬಡವರಲ್ಲವೆ, ಸರ್ಕಾರಿ ಕಾಲೇಜಿಗೆ ಬರುತ್ತಾರೆ ಅಂದರೆ ಅವರು ಕೂಡ ಆರ್ಥಿಕವಾಗಿ ಹಿಂದೆ ಇರುತ್ತಾರೆ ಅಲ್ಲವೇ. ಬರಿ ಒಂದು ವರ್ಗಕ್ಕೆ ಮಾತ್ರ ಉಚಿತ ಏಕೆ?. ನಾನು ಯಾವುದೇ ಜಾತಿಯ ಬಗ್ಗೆ ಮಾತನಾಡುತ್ತಿಲ್ಲ. ದೇಶದ ಎಲ್ಲಾ ಅರ್ಹ ಆರ್ಥಿಕವಾಗಿ ಹಿಂದಿರುವ ಕುಟುಂಬದ ಮಕ್ಕಳಿಗೆ ಉಚಿತ ಮತ್ತು ಉನ್ನತ ಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಶಯ ನನ್ನದು.
ಈಗ ವಿದ್ಯಾರ್ಥಿವೇತನ ಮತ್ತು ವಿದ್ಯಾರ್ಥಿನಿಲಯಗಳ ವಿಷಯಕ್ಕೆ ಬರೋಣ, SC ಮತ್ತು ST ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇತರರಿಗೆ ಹೋಲಿಸಿದರೆ ಜಾಸ್ತಿನೆ ಕೊಡುತ್ತಿದ್ದಾರೆ. ಕೊಡಲಿ ಬೇಡ ಅನ್ನುವುದಿಲ್ಲ, ಆದರೆ ಇತರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಡಿಮೆ ನೀಡುತ್ತಿದ್ದಾರೆ. ವಿದ್ಯಾರ್ಥಿನಿಲಯಗಳ ವಿಷಯಕ್ಕೆ ಬಂದರೆ, ನಮ್ಮ ತುಮಕೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ಬರಿ SC ಮತ್ತು ST ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಿದ್ದಾರೆ. ಇತರೆ ಸಮುದಾಯದ ಸ್ನಾತ್ತಕೋತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲಿ ಪ್ರವೇಶವಿಲ್ಲ . ಅಂತಹ ವಿದ್ಯಾರ್ಥಿಗಳು ಬಾಡಿಗೆ ಮನೆ ಮಾಡಿ ತಮ್ಮ ಊಟ ತಾವೇ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ದುಡ್ಡು ದುಡ್ಡು ಇರುವವರು ಹಾಗೆ ಮಾಡುತ್ತಾರೆ ದುಡ್ಡು ಇಲ್ಲದವರು ಏನು ಮಾಡಬೇಕು. ನನ್ನ ಸ್ನೇಹಿತ obc ಗೆ ಸೇರಿದವ ಅವನಿಗೆ ಎಲ್ಲಿಯೂ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ದೊರಕಲಿಲ್ಲ ಮತ್ತು ಬಾಡಿಗೆ ಮನೆ ಮಾಡುವಷ್ಟು ಹಣ ಇರುವುದಿಲ್ಲ ಮತ್ತು ಪ್ರತಿದಿನ ಊರಿನಿಂದ ತುಮಕೂರಿಗೆ ೮೦+೮೦=೧೬೦ ಕಿಮೀ ಬಸ್ ಮೂಲಕ ಪ್ರಯಾಣ ಮಾಡುವ ದುಸ್ಥಿತಿ ಅವನಿಗಿದೆ. ವೈದ್ಯಕೀಯ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ಪಡೆಯಲು ನಮ್ಮವರು ಇಲ್ಲಿಂದ ಉಕ್ರೇನ್ ಗೆ ಹೋಗಿದ್ದರು. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ನಮ್ಮವರು ಪ್ರಾಣವನ್ನು ಕಳೆದುಕೊಂಡಿದ್ದನು ತಿಳಿದಿದ್ದೇವೆ. ಅವರ ಸಾವಿಗೆ ಕಾರಣ ನಮ್ಮ ದೇಶದ ದುಬಾರಿ ಉನ್ನತ ಶಿಕ್ಷಣ, ಹೌದಲ್ವ ?.
ನಮ್ಮ ಭಾರತ ಆರ್ಥಿಕವಾಗಿ ಮುಂದುವರೆಯುತ್ತಿರುವ ರಾಷ್ಟ್ರವಾದ್ದರಿಂದ, ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ತೆಗೆದು ಎಲ್ಲಾ ವರ್ಗದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಉನ್ನತ ಮಟ್ಟದಲ್ಲಿ ಸರ್ಕಾರಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ನಿರ್ಮಾಣಮಾಡಿ ಎಲ್ಲಾ ಮಕ್ಕಳಿಗೂ ಉಚಿತವಾಗಿ ಉನ್ನತ ಮಟ್ಟದ ಶಿಕ್ಷಣ ನೀಡಬೇಕು. ಸರ್ಕಾರಗಳು ಮನಸ್ಸು ಮಾಡಿದರೆ ಖಾಸಗಿ ಶಾಲೆ ಮತ್ತು ಕಾಲೇಜುಗಳನ್ನು ನಮ್ಮ ದೇಶದಿಂದ ತೆಗೆದು ಹಾಕಬಹುದಲ್ಲವೆ. ಶಿಕ್ಷಣ ವ್ಯಾಪಾರವಾಗದೆ ಉಚಿತವಾದರೆ ಆ ಶಿಕ್ಷಣ ಪಡೆದ ಮಕ್ಕಳು ದೇಶಕ್ಕೆ ಮರಳಿ ಏನನ್ನಾದರೂ ಕೊಡುಗೆ ನೀಡುತ್ತಾರೆ. ಎಲ್ಲರಿಗೂ ಶಿಕ್ಷಣ ದೊರೆತರೆ ಹಂತ ಹಂತವಾಗಿ ಇತರೆ ಕ್ಷೇತ್ರಗಳಲ್ಲೂ ಮೀಸಲಾತಿ ತೆಗೆಯಬಹುದು, ಅಲ್ಲವೆ.
Credits and Thanks:- Praja Pragathi
Image Courtesy:- Praja Pragathi
ಕಿರಣ್ ಕುಮಾರ್ ಡಿ
ದೊಗ್ಗನಹಳ್ಳಿ, ತುಮಕೂರು
0 Comments